ಕಂಕೋಶ ಹುಳು : ಒರೆತೂರಿಸಿದ (ಇನ್ವೆಜಿನೇಟೆಡ್) ಒಂಟಿ ಕೊಂದಲೆಯೂ (ಸ್ಕೊಲೆಕ್ಸ್‌) ಒಂದು ದೊಡ್ಡ ಜಿಟ್ಟಿಯೂ (ಸಿಸ್ಟ್‌) ಇರುವ ಲಾಡಿಹುಳುವಿನ ಮರಿಹುಳು (ಲಾರ್ವಲ್) ರೂಪ (ಬ್ಲಾಡರ್ ವರ್ಮ್). ಗೋಳದಂತಿರುವ ಜಿಟ್ಟಿಭಾಗ ಕಂಕೋಶ ವನ್ನು ಹೋಲುವುದರಿಂದ ಈ ಹೆಸರಾಗಿದೆ. ಕಂಕೋಶಹುಳುವಿಗೆ ವೈದ್ಯದಲ್ಲಿ ಸಂಚಿಬಾಲ (ಸಿಸ್ಟಿಸರ್ಕಸ್) ಎಂದು ಹೆಸರು. ಕಂಕೋಶ ಹುಳುವಾಗುವುದು ಲಾಡಿಹುಳುಗಳ ಒಂದು ವಿಶೇಷ ಲಕ್ಷಣ. ಹಂದಿಗಳ ಮತ್ತು ದನಗಳ ಮಾಂಸಗಳಲ್ಲಿ ಕಂಕೋಶಹುಳುವಿನ ಸೋಂಕಾಗುವುದು ಸಾಮಾನ್ಯ. ಹಂದಿಯಲ್ಲಿನ ಈ ಸೋಂಕು ಮಾನವನಿಗೂ ಹತ್ತ ಬಹುದು. ಯಾವ ಅಂಗದಲ್ಲಿ ನೆಲೆಸಿರುವುದೋ ಅದಕ್ಕೆ ತಕ್ಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಿದುಳಲ್ಲಿ ನೆಲೆಸಿತೆಂದರೆ ಮೊಲ್ಲಾಗರದ ಸೆಳವುಗಳು ಕಾಣಿಸಿಕೊಳ್ಳಬಹುದು.	(ಡಿ.ಎಸ್.ಎಸ್.; ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ